GST rates set to increase to generate additional revenue to the Government.
ಕ್ರಿಸ್ಮಸ್ ಹಾಗೂ ಹೊಸವರ್ಷಕ್ಕೆ ಶಾಕಿಂಗ್ ಉಡುಗೊರೆ. ಏರಿಕೆಯಾಗಲಿದೆ GST.
ದ್ವಿಶತಕಕ್ಕೆ ಸಮೀಪಿಸುತ್ತಿರುವ ಈರುಳ್ಳಿ ಬೆಲೆ, ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಯಿಂದಾಗಿ ಭಾರತದಲ್ಲಿ ಸಾಮಾನ್ಯ ಜನರ ಜೀವನ ಅತಂತ್ರವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿನ ಏರಿಕೆ ಜನಜೀವನವನ್ನು ಇನ್ನೂ ಸಂಕಷ್ಟಕ್ಕೆ ದೂಡಿದೆ. ಹೀಗಿರುವಾಗ ಸರಕಾರದ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸವರ್ಷದ ಉಡುಗೊರೆಗಾಗಿ ಕಾಯಿತ್ತಿದ್ದ ಭಾರತೀಯರಿಗೆ ಸದ್ಯದಲ್ಲೇ ಒಂದು ಶಾಕಿಂಗ್ ಸುದ್ದಿ ಬರಲಿದೆ ಎಂದು ಹೇಳಲಾಗುತ್ತಿದೆ.
For ENGLISH content CLICK HERE.
ಈಗಾಗಲೇ ಭಾರತದ ಕುಸಿಯುತ್ತಿರುವ ಅರ್ಥವ್ಯವಸ್ಥೆಯ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿದ್ದು, ಆರ್ಥಿಕತೆಯಲ್ಲಿ ಇನ್ನೂ ಕುಸಿತ ಉಂಟಾಗುತ್ತಿದೆಯೇ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಕೇಂದ್ರ ಸರ್ಕಾರದ ಈ ಮಹತ್ವದ ಸುಳಿವು.
ಕೇಂದ್ರ ಸರ್ಕಾರವು ಆದಾಯದ ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹಲವು ಅಗತ್ಯ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಏರಿಕೆ ಮಾಡಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಪ್ರಸ್ತುತ ಶೇಕಡಾ 5 ರ ತೆರಿಗೆ ಸ್ಲ್ಯಾಬ್ ನಲ್ಲಿರುವ ವಸ್ತುಗಳ ತೆರಿಗೆಯನ್ನು ಶೇಕಡಾ 9 ಅಥವಾ 10 ಕ್ಕೆ ಏರಿಕೆ, ಅದೇ ರೀತಿ ಶೇಕಡಾ 12 ರ ತೆರಿಗೆಯನ್ನು ಶೇಕಡಾ 18 ಕ್ಕೆ ಏರಿಕೆ ಮಾಡುವುದರ ಮೂಲಕ ಕೇಂದ್ರ ಸರಕಾರದ ಬೊಕ್ಕಸಕ್ಕೆ ಅಂದಾಜು 2.5 ಲಕ್ಷ ಕೋಟಿಗಳಷ್ಟು ಹೆಚ್ಚಿನ ಆದಾಯ ಬರಲಿದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಸರಕಾರವು GST ಅನುಷ್ಟಾನಗೊಳಿಸಿದ ನಂತರ ಕೆಲವೊಂದು ವಸ್ತುಗಳ ತೆರಿಗೆಯನ್ನು ಇಳಿಕೆ ಮಾಡುವುದರ ಮೂಲಕ ಜನರಿಗೆ ಸಿಹಿಸುದ್ದಿಯನ್ನು ನೀಡಿತ್ತು. ಆದರೆ ಇದೀಗ ಆದಾಯ ಕೊರತೆಯ ನೆಪವೊಡ್ಡಿ ಸರಕು ಹಾಗೂ ಸೇವಾ ತೆರಿಗೆಯ ಏರಿಕೆಗೆ ಮುಂದಾಗಿದ್ದು ಡಿಸೆಂಬರ್ 18 ರಂದು ನಡೆಯಲಿರುವ GST ಮಂಡಳಿ ಸಭೆಯಲ್ಲಿ ನಿರ್ಧಾರವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಈವರೆಗೆ ನಡೆಸುತ್ತಿರುವ ಚಿಂತನೆಯಂತೆ ತೆರಿಗೆ ಏರಿಕೆಯಾದರೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದು ಮಾತ್ರವಲ್ಲದೆ ಹಲವಾರು ಸಣ್ಣ ಉದ್ಯಮಗಳು ತಮ್ಮ ಉದ್ಯಮವನ್ನು ಶಾಶ್ವತವಾಗಿ ಮುಚ್ಚಬೇಕಾದ ಪರಿಸ್ಥಿತಿಯೂ ಎದುರಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.