ವಿಶಿಷ್ಟ ರೀತಿಯ ದೀಪಾವಳಿ ಆಚರಣೆಗೆ ಸಾಕ್ಷಿಯಾದ “ಮನುಷ್ಯ ಧರ್ಮ”
“ಮನುಷ್ಯತ್ವವೇ ನಮ್ಮ ಧರ್ಮ” ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜಮುಖಿ ಚಿಂತನೆಯ ಸೇವಾ ಮನೋಭಾವದ ವ್ಯಕ್ತಿತ್ವವನ್ನು ಹೊಂದಿದ ಶ್ರೀ ರೋಶನ್ ಡಿಸೋಜಾ, ಬೆಳ್ಮಣ್ಣು ಇವರು ಪ್ರಾರಂಭಿಸಿದ ಹ್ಯುಮಾನಿಟಿ ಸಂಸ್ಥೆಯ 424 – ನೇ ಯೋಜನೆಯಾಗಿ ಹ್ಯುಮಾನಿಟಿಯ ದಾನಿ ಅಭಿಮಾನಿಗಳು ಒಂದು ವಿಶಿಷ್ಟ ಹಾಗೂ ಅರ್ಥ ಪೂರ್ಣ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಹ್ಯುಮಾನಿಟಿ ಕ್ಲಬ್ ಬಂಟ್ವಾಳ ಟೀಂ ಇವರ ನೇತೃತ್ವದಲ್ಲಿ ದಿನಾಂಕ 27/10/2019 ರಂದು ಆಚರಿಸಿದರು.
ಬಂಟ್ವಾಳ ತಾಲೂಕಿನ ನೆಲ್ಲಿಮಾರು – ಬಡಗಬೆಳ್ಳೂರು ಗ್ರಾಮದ ಶ್ರೀಮತಿ ಸುಶೀಲರವರು ತಮ್ಮ ಮಗಳ ವಿದ್ಯಾಭ್ಯಾಸಕ್ಕಾಗಿ ಹ್ಯುಮಾನಿಟಿ ಟ್ರಸ್ಟ್ ಬೆಳ್ಮಣ್ ಇದರ ಸ್ಥಾಪಕರಾದ ಶ್ರೀ ರೋಶನ್ ಡಿಸೋಜಾ, ಇವರನ್ನು ಭೇಟಿಯಾಗಿ 20,000 ರೂ. ಸಹಾಯಧನವನ್ನು ಕೋರಿದ್ದರು. ಅರ್ಜಿಯೊಂದಿಗೆ ಲಗತ್ತೀಕರಿಸಿದ ಭಾವಚಿತ್ರಗಳನ್ನು ಪರಿಶೀಲಿಸುವಾಗ ಶಿಥಿಲಾವಸ್ಥೆಯಲ್ಲಿದ್ದ ಅವರ ಮನೆಯ ಪರಿಸ್ಥಿತಿಯನ್ನು ಕಂಡು ವಿದ್ಯಾಭ್ಯಾಸದ ಜೊತೆಗೆ ಸುಶೀಲರವರ ಕುಟುಂಬಕ್ಕೆ ಒಂದು ಉತ್ತಮ ಸೂರಿನ ಅವಶ್ಯಕತೆ ಇದೆ ಎಂದು ಮನಗಂಡ ಸ್ಥಾಪಕರು ತಕ್ಷಣ ಹ್ಯುಮಾನಿಟಿ ಟೀಂ ಬಂಟ್ವಾಳ ಇದರ ಸಂಚಾಲಕರಾದ ಪ್ರಶಾಂತ್ ಫ್ರಾಂಕ್ ಇವರನ್ನು ಸಂಪರ್ಕಿಸಿ ಮನೆಯ ಪರಿಶೀಲನೆ ನಡೆಸಿದರು.
ಕೇವಲ 6-7 ಅಡಿ ಎತ್ತರಕ್ಕೆ ಸಿಮೆಂಟು ಶೀಟುಗಳನ್ನು ಹಾಕಿ ನಿರ್ಮಿಸಿದ ಪುಟ್ಟದಾದ ಮನೆಯಲ್ಲಿ ಗಾಳಿಯಾಡುವುದೇ ಕಷ್ಟಕರವಾಗಿತ್ತು. ಮಣ್ಣಿನ ನೆಲ, ಮುರಿದು ಹೋದ ಬಾಗಿಲುಗಳು, ಕಿಟಕಿಗಳಿಗೆ ಪ್ಲಾಸ್ಟಿಕ್ ಹಾಕಿ ಮುಚ್ಚಲಾಗಿತ್ತು. ಇಂತಹ ಶಿಥಿಲಾವಸ್ಥೆಯ ಸ್ಥಿತಿಯಲ್ಲಿದ್ದ ಮನೆಯನ್ನು ನವೀಕರಣಗೊಳಿಸಲು ಅಂದಾಜು ವೆಚ್ಚದ ಪಟ್ಟಿಯನ್ನು ತಯಾರಿಸಿದಾಗ 2 ಲಕ್ಷದ ಅವಶ್ಯಕತೆ ಇತ್ತು. ರಸ್ತೆಯಿಂದ ಸುಮಾರು 300 ಅಡಿ ಎತ್ತರದ ಗುಡ್ಡಗಾಡು ಪ್ರದೇಶದಲ್ಲಿರುವ ಈ ಮನೆಗೆ ದುರಸ್ತಿ ಸಾಮಾಗ್ರಿಗಳನ್ನು ಹೊತ್ತೊಯ್ಯುವುದು ದೊಡ್ಡ ಸವಾಲಾಗಿತ್ತು.
ಸಿಮೆಂಟ್ ಪ್ಲಾಸ್ಟರಿಂಗ್ ಆಗದ ಮನೆ ಈಗ ಸಂಪೂರ್ಣ ಸುಣ್ಣ-ಬಣ್ಣ ದಿಂದ ಕಂಗೊಳಿಸುತ್ತಿದೆ. ಮನೆ ಕಿಟಕಿ ಬಾಗಿಲುಗಳು ದುರಸ್ಥಿ ಮಾಡುವ ಸ್ಥಿತಿಯಲ್ಲಿ ಇರದ ಕಾರಣ ಹೊಸ ದಾರಂದ, ಹೊಸ ಬಾಗಿಲು, ಕಿಟಕಿಗಳನ್ನು ಜೋಡಿಸಲಾಗಿದೆ. ಮನೆಯ ಮುಂದೆ ಕೂರಲು ಒಂದು ಜಗಲಿ ಮಾಡಿ ಕೊಡಲಾಗಿದ್ದು ಮನೆಯ ಪಕ್ಕದಲ್ಲಿಯೇ ಇದ್ದ ಬಂಡೆ ಕಲ್ಲು ಹೊಡೆದು ಅಂಗಳಕ್ಕೆ ಜಾಗ ಮಾಡಿ ಕೊಡಲಾಗಿದೆ. ಸಂಪೂರ್ಣ ಹದಗೆಟ್ಟ ನೆಲ ಇಗ ದುರಸ್ತಿಯಾಗಿದೆ. ನೆಲದಲ್ಲಿ ಕೂರಿ ಮತ್ತು ಬಗ್ಗಿಕೊಂಡು ಅಡುಗೆ ಮಾಡಬೇಕಾದ ಪರಿಸ್ಥಿತಿ ಇತ್ತು, ಈಗ ಅಡುಗೆ ಮಾಡಲು ಸುಸಜ್ಜಿತ ಒಲೆಯ ವ್ಯವಸ್ಥೆ ತಯಾರಾಗಿದೆ. ಕೇವಲ ಆರುವರೆ ಫೀಟ್ ಎತ್ತರದಲ್ಲಿ ಸಿಮೆಂಟ್ ಶೀಟ್ ಚಾವಣಿ ಇದ್ದು ಬೇಸಿಗೆ ತಾಪ ತಾಳಲಾಗುತ್ತಿರಲಿಲ್ಲ. ಹೊಟ್ಟೆ ಪಾಡಿಗಾಗಿ ಸ್ಥಳೀಯ ಹೋಟೆಲ್ ಒಂದರಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡಿಕೊಂಡಿರುವ ವಿಧವೆ ಸುಶೀಲ ಪೂಜಾರಿಯವರು ತಮ್ಮ ಇಬ್ಬರು ಮಕ್ಕಳನ್ನು ಒಳಗೊಂಡ ಕುಟುಂಬದ ನಿರ್ವಹಣೆಗಾಗಿ ಪರಿತಪಿಸುತಿದ್ದರು. ಕಡು ಬಡತನದ ನಡುವೆಯು PUC ಯಲ್ಲಿ 82% ಅಂಕ ಪಡೆದ ಸುಶೀಲರವರ ಪ್ರತಿಭಾವಂತ ಮಗಳು ತನ್ನ ತಮ್ಮನ ಜೊತೆ ಮನುಷ್ಯರು ಜೀವಿಸಲು ಯೋಗ್ಯವಲ್ಲದ ಈ ಮನೆಯಲ್ಲಿಯೇ ಅಸಹಾಯಕತೆಯ ಬದುಕು ಕಟ್ಟಿಕೊಂಡಿದ್ದರು. ಅವರ ನೋವಿಗೆ ಸ್ಪಂದಿಸಿ ಮನೆ ಛಾವಣಿಯ ಸಿಮೆಂಟ್ ಶೀಟ್ ತೆಗೆದು ಮನೆ ಛಾವಣಿಯನ್ನು ಎತ್ತರಿಕರಿಸಿ ಇಗ ಈ ಮನೆಗೆ ಹಂಚಿನ ಛಾವಣಿಯನ್ನು ಮಾಡಿಕೊಡಲಾಗಿದೆ.
ನಮ್ಮ ಕಾರ್ಲ ಕೇಬಲ್ ನೆಟ್ವರ್ಕಿನ ಸ್ಥಾಪಕರಾದ ಶ್ರೀಮತಿ ಅರ್ಚನಾ ರವರು ತಮ್ಮ “ಅಪ್ಸರಾ” ಕಾರ್ಯಕ್ರಮದ ಮೂಲಕ ಸಂಗ್ರಹಿಸಿದ 45,000 ರೂ ಗಳನ್ನು ಹ್ಯುಮಾನಿಟಿ ಟ್ರಸ್ಟ್ ಗೆ ಒಂದು ಉತ್ತಮ ಸೇವಾ ಕಾರ್ಯಕ್ಕೆ ವಿನಿಯೋಗಿಸಿಕೊಳ್ಳಲು ನೀಡಿದ ದೇಣಿಗೆಯನ್ನು ಮೂಲ ಬಂಡವಾಳವಾಗಿ ಬಳಸಿಕೊಳ್ಳಲು ನಿರ್ಧರಿಸಿದ ರೋಶನ್ ಡಿಸೋಜಾರವರು ಕೆಲಸ ಕೈಗೊಳ್ಳುವಂತೆ ಹ್ಯುಮಾನಿಟಿ ಟೀಂ ಬಂಟ್ವಾಳಕ್ಕೆ ಜವಾಬ್ದಾರಿಯನ್ನು ವಹಿಸಿಕೊಟ್ಟರು. ಕೆಲಸ ಪ್ರಾರಂಭಿಸಿದ ನಂತರ ಸ್ಥಳೀಯರು, ಹ್ಯುಮಾನಿಟಿ ಟೀಂ ನ ಸದಸ್ಯರು, ಉದಾರ ಮನಸ್ಸಿನ ದಾನಿಗಳು ಹಾಗೂ ಇತರ ಸಮಾನ ಮನಸ್ಕ ಸಂಘ-ಸಂಸ್ಥೆಗಳು ಜೊತೆಗೂಡಿ ಶ್ರಮದಾನ ಹಾಗೂ ಆರ್ಥಿಕ ಸಹಾಯ ಮಾಡುವ ಮೂಲಕ ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ಅಚ್ಚರಿಯ ಸಂಗತಿಯೇನೆಂದರೆ 2 ಲಕ್ಷ ಹಣದ ಅಗತ್ಯತೆಯಿದ್ದ ಈ ಯೋಜನೆ ಕೇವಲ 1 ಲಕ್ಷ ಹಣದ ವಿನಿಯೋಗದಿಂದ ಪೂರ್ಣಗೊಂಡಿದೆ. ಸಮಾನ ಮನಸ್ಕರು ಒಗ್ಗೂಡಿ ಮಾಡಿದ ಶ್ರಮದಾನ ಹಾಗೂ ವಸ್ತುರೂಪದಲ್ಲಿ ನೀಡಿದ ದಾನವು 1 ಲಕ್ಷ ಹಣವನ್ನು ಉಳಿಯುವಂತೆ ಮಾಡಿದೆ. ಈ ಉಳಿಕೆ ಹಣವನ್ನು ಇತರ ಫಲಾನುಭವಿಗಳಿಗೆ ವಿನಿಯೋಗಿಸಲಾಗುವುದು ಎಂದು ಟ್ರಸ್ಟ್ ನ ಸ್ಥಾಪಕರು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಶ್ರೀಮತಿ ಸುಶೀಲರವರು ಅಂದುಕೊಳ್ಳದೆ ಇದ್ದ ಮನೆಯ ದುರಸ್ತಿ ಕಾರ್ಯ ಇಂದು ಸಂಪೂರ್ಣಗೊಳ್ಳಬೇಕಾದರೆ ಅವರ ಮಗಳು ಕುಮಾರಿ ಚೈತ್ರಾ ರವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಅಂಕಗಳನ್ನು ಗಳಿಸಿರುವುದೇ ಕಾರಣ. ಬಡತನ ಯಾವುದೇ ಸಾಧನೆಗೆ ಅಡ್ಡಿಯಲ್ಲ. ಮನಸಿದ್ದರೆ ಎಲ್ಲವನ್ನು ಸಾಧಿಸಲು ಸಾಧ್ಯ ಎಂದು ಈ ಹೆಣ್ಣು ಮಗಳು ಸಾಬೀತುಪಡಿಸಿದ್ದಾಳೆ. ಆದ್ದರಿಂದ ಇವತ್ತು ಸುಶೀಲರವರ ಮನೆ ದುರಸ್ತಿ ಕಾರ್ಯ ಹಾಗೂ ಮಗಳ ವಿದ್ಯಾಭ್ಯಾಸದ ಅಗತ್ಯತೆ ಪೂರೈಕೆಯಾಗಿದೆ. ದೀಪಾವಳಿಯ ಬೆಳಕು ಇಂದು ಸುಶೀಲರವರ ಮನೆಯಲ್ಲಿ ತುಂಬಿದೆ. ಅವರ ಮುಖದಲ್ಲಿನ ಸಂತೋಷವನ್ನು ನೋಡುವಾಗ ದೀಪಾವಳಿ ಹಬ್ಬದ ಪ್ರಯುಕ್ತ ಉಳಿತಾಯ ಮಾಡಿ ಈ ಕುಟುಂಬಕ್ಕೆ ಸಹಾಯ ಮಾಡಿದವರ ಮನಸ್ಸಿನಲ್ಲಿ ಇಂದು ಸಾರ್ಥಕತೆಯ ಭಾವ ಮೂಡಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಇನ್ನೊಂದು ವಿಶೇಷತೆ ಏನೆಂದರೆ ಈ ಯೋಜನೆಗೆ ಶ್ರಮದಾನ, ಧನಸಹಾಯ ಹಾಗೂ ಕಾರ್ಯಕ್ರಮ ಆಯೋಜನೆಯಲ್ಲಿ ಕ್ರೈಸ್ತ, ಹಿಂದೂ ಹಾಗೂ ಮುಸ್ಲಿಂ ಭಾಂದವರು ಒಟ್ಟುಗೂಡಿ ಸೋದರತ್ವವನ್ನು ಮೆರೆದರು.ಸುಶೀಲರವರ ನವೀಕೃತ ಮನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೂರು ಧರ್ಮದವರು ಜೊತೆಸೇರಿ ದೀಪವನ್ನು ಬೆಳಗಿಸಿ, ಹಣತೆಗಳನ್ನು ಹಚ್ಚಿ, ಸಿಹಿ ಹಂಚಿ ದೀಪಾವಳಿ ಹಬ್ಬವನ್ನು ಆಚರಿಸುವುದರ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಿದರು.
27/10/2010 ರಂದು ನಡೆದ ನಮೀಕೃತ ಮನೆಯ ಉದ್ಘಾಟನೆ ಕಾರ್ಯಕ್ರಮವನ್ನು ನಮ್ಮ ಕಾರ್ಲ ಕೇಬಲ್ ನೆಟ್ವರ್ಕಿನ ಸ್ಥಾಪಕರಾದ ಶ್ರೀಮತಿ ಅರ್ಚನಾ ರವರು ನೆರವೇರಿಸಿದರು. ಹ್ಯುಮಾನಿಟಿ ಟ್ರಸ್ಟ್ ನ ಸ್ಥಾಪಕರಾದ ಶ್ರೀ ರೋಶನ್ ಡಿಸೋಜಾ ಬೆಳ್ಮಣ್, ಕ್ಲಬ್ ನ ಬಂಟ್ವಾಳ ಟೀಂ ಸಂಚಾಲಕರಾದ ಶ್ರೀ ಪ್ರಶಾಂತ್ ಫ್ರಾಂಕ್ ಹಾಗೂ ಕ್ಲಬ್ ನ ಸದಸ್ಯರು, ನೂರಾರು ಸ್ಥಳೀಯರು, ದಾನಿಗಳು ಹಾಗೂ ಇತರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.
ಹ್ಯುಮಾನಿಟಿ ತಂಡ ಬಂಟ್ವಾಳ ಹಾಗೂ ಸ್ಥಳೀಯರ ಜೊತೆ ಫಾಲ್ಗುಣಿ ಸೇವಾ ಸಮಿತಿಯ ಸದಸ್ಯರು ಸೇರಿಕೊಂಡು ಶ್ರಮದಾನದ ಮೂಲಕ ಈ ಮನೆ ಕಾಮಗಾರಿ ಕೆಲಸಕ್ಕೆ ಶ್ರಮಿಸಿದ್ದಾರೆ ಮತ್ತು ಸಂಪೂರ್ಣ ಸಹಕಾರವನ್ನು ಕೊಟ್ಟಿದ್ದಾರೆ.
ಶ್ರಮದಾನ ಮೂಲಕ ಮಳೆ ಗಾಳಿ ಲೆಕ್ಕಿಸದೆ ಜೊತೆ ನಿಂತು, ಹ್ಯುಮಾನಿಟಿ ತಂಡ ಬಂಟ್ವಾಳಕ್ಕೆ ಹೊಸದಾಗಿ ಸೇರ್ಪಡೆಗೊಂಡ ಮತ್ತು ಈ ಮನೆ ರಿಪೇರಿ ಕೆಲಸಕ್ಕೆ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡ ಸ್ಥಳೀಯರಾದ ಯೋಗೀಶ್ ರವರಿಗೆ ಹ್ಯುಮಾನಿಟಿ ವತಿಯಿಂದ ಸನ್ಮಾನಿಸಲಾಯಿತು.
ಈ ಯೋಜನೆಗೆ ರೂ. 45,000 ದೊಡ್ಡ ಮೊತ್ತವನ್ನು ಸಂಗ್ರಹಿಸಿ ಕೊಟ್ಟ ಶ್ರೀಮತಿ ಅರ್ಚನ ಶೆಟ್ಟಿಯವರಿಗೆ ಈ ದೀಪಾವಳಿ ಪ್ರೊಜೆಕ್ಟ್ ಗೆ ದಾನ ನೀಡಿದ ಎಲ್ಲಾ ಹಿಂದೂ ಬಾಂಧವರ ಪರವಾಗಿ ಪ್ರೀತಿಯಿಂದ, ಅಭಿಮಾನದಿಂದ ಸನ್ಮಾನಿಸಲಾಯಿತು. ಈ ಸನ್ಮಾನ ದಾನಿಗಳಾದ ಎಲ್ಲಾ ಹಿಂದೂ ಬಾಂಧವರಿಗೆ ಸಲ್ಲುತ್ತದೆ.
ಸ್ಥಳೀಯ ಸಮಾಜ ಸೇವಕ ಮುಸ್ಲಿಂ ಬಾಂಧವರಾದ ಇಸ್ಮಾಯಿಲ್ ಶಾಫಿರವರು ಮನೆ ಕೆಲಸಕ್ಕೆ ಅಗತ್ಯವಿರುವ ಮರಳು ಮತ್ತು 25 ಗೋಣಿ ಸಿಮೆಂಟ್ ಉಚಿತವಾಗಿ ನೀಡಿರುತ್ತಾರೆ, ಅದಲ್ಲದೆ ಮುನೀರ್ ನಡುಪಲ್ಲರವರ ನಾಯಕತ್ವದಲ್ಲಿ ಬಡಜನ ಸೇವಾ ಫ್ರೆಂಡ್ಸ್ ಕುಪ್ಪೆಪದವು ಮಿತ್ರರು ರೂ.10,000 ದೇಣಿಗೆ ನೀಡಿರುತ್ತಾರೆ. ಪ್ರೀತಿ ಮತ್ತು ಸೌಹಾರ್ದತೆ ಸಾರಿದ ಎಲ್ಲಾ ನಮ್ಮ ಮುಸ್ಲಿಂ ಸಮುದಾಯದ ದಾನಿಗಳ ಪರವಾಗಿ ಮುನೀರ್ ನಡುಪಲ್ಲರವರಿಗೆ ಅಭಿಮಾನದಿಂದ ಸನ್ಮಾನಿಸಲಾಯಿತು.
ಒಬ್ಬ ರಿಕ್ಷಾ ಚಾಲಕರಾಗಿ ತಾನು ಕಷ್ಟದಲ್ಲಿದ್ದರೂ ಇತರರ ನೋವಿಗೆ ಸದಾ ಸ್ಪಂದಿಸುವ ಮನಸ್ಸುಳ್ಳ ಜೊಸ್ಸಿ ಡಿಸೋಜರವರು ಈ ದೀಪಾವಳಿ ಯೋಜನೆಗೆ ರೂ.5,000 ದೇಣಿಗೆ ತ್ಯಾಗ ಮನೋಭಾವದಿಂದ ನೀಡಿರುತ್ತಾರೆ. ಈ ದೀಪಾವಳಿ ಯೋಜನೆಗೆ ನಮ್ಮ ಜೊತೆಗೂಡಿದ ಎಲ್ಲಾ ಕ್ರೈಸ್ತ ಸಮುದಾಯದ ದಾನಿಗಳ ಪರವಾಗಿ ಜೊಸ್ಸಿ ಡಿಸೋಜ ರವರಿಗೆ ಪ್ರೀತಿಯಿಂದ ಸನ್ಮಾನಿಸಲಾಯಿತು.
ಈ ದೀಪಾವಳಿ ಪ್ರೊಜೆಕ್ಟ್ ಇಲ್ಲಿಗೆ ಮುಗಿದಿಲ್ಲ ಕಾರಣ ಎಲ್ಲರ ಶ್ರಮ-ಸಹಕಾರ ಮತ್ತು ತ್ಯಾಗದಿಂದ 2,00,000ರೂ ಬಜೆಟ್ ನ ಈ ಯೋಜನೆ 1,00,000 ರೂ ನಲ್ಲಿ ಮುಗಿದಿದೆ. ಇನ್ನೂ ಕೆಲವು ದಾನಿಗಳ ಪರಿಚಯ ಮಾಡಿಕೊಡಬೇಕಾಗಿದೆ ಹಾಗೂ ಈ ದೀಪಾವಳಿ ಯೋಜನೆಯಲ್ಲಿ ಉಳಿದ ಹಣದಿಂದ ಮತ್ತೊಂದು ಇಂತಹದೇ ಯೋಜನೆ ಆರಂಭಿಸಲು ಹ್ಯುಮಾನಿಟಿ ತಂಡ ಬಂಟ್ವಾಳ ಸಜ್ಜಾಗಿದೆ. ಈ ಹೊಸ ಯೋಜನೆಯ ವಿವರಗಳನ್ನು ಮುಂದೆ ತಿಳಿಸಲಾಗುವುದು.
ಸುಶೀಲ ಪೂಜಾರಿಯವರ ಮೊಗದಲ್ಲಿ ಅರಳಿದ ನಗುವಿನ ಬೆಳಕು ಎಲ್ಲರ ಹೃದಯದಲ್ಲಿ ಹೊಸ ಹುರುಪು ತುಂಬಿಸಿದೆ, ಇಂತಹ ಸಾವಿರಾರು ಅಸಹಾಯಕರಿಗೆ ಸಹಾಯ ಹಸ್ತ ಚಾಚಿದ ಹ್ಯುಮಾನಿಟಿ ಟ್ರಸ್ಟ್ ನ ಎಲ್ಲಾ ದಾನಿ, ಅಭಿಮಾನಿಗಳಿಗೆ ದೇವರು ಹರಸಲಿ, ಕಾಪಾಡಲಿ ಮತ್ತು ಆಶೀರ್ವದಿಸಲಿ ಎಂದು ಹ್ಯುಮಾನಿಟಿ ಟ್ರಸ್ಟ್ ಆಶಿಸುತ್ತದೆ.
ಇಂತಹ ಹಲವಾರು ಯೋಜನೆಗಳು ಈಗಾಗಲೇ ಪ್ರಗತಿ ಹಂತದಲ್ಲಿದ್ದು ಇನ್ನೂ ಹಲವಾರು ಯೋಜನೆಗಳು ಕೈಗೊಳ್ಳಬೇಕಾಗಿದ್ದು, ಸಹಾಯ ಹಸ್ತ ಚಾಚಲು ಬಯಸುವವರು ಹ್ಯುಮಾನಿಟಿ ಟ್ರಸ್ಟನ್ನು ಸಂಪರ್ಕಿಸಬಹುದು.
Humanity is the best religion to mankind.
Tremendous work for the society by Humanity Trust. May god bless the founder, members and all the donors and well wishers of this trust..
GOOD JOB BY HUMANITY TRUST.